ಕಾಲೊರಾಡೋ ನದಿ

ಅಮೆರಿಕದ ವೀಯೊಮಿಂಗ್, ಕಾಲೊರಾಡೋ ಮತ್ತು ಯೂಟಾ ಪರ್ವತಗಳಲ್ಲಿ ಉಪನದಿಗಳೊಂದಿಗೆ ಉಗಮಿಸಿ 1,440 ಮೈಲಿಗಳುದ್ದ ಪ್ರವಹಿಸಿ ಕ್ಯಾಲಿಫೋರ್ನಿಯ ಕೊಲ್ಲಿಯನ್ನು ಸೇರುವ ನದಿ. ಇದರ 2,44,000 ಚ. ಮೈ. ಗಳ ಜಲಾನಯನ ಪ್ರದೇಶ ವೀಯೊಮಿಂಗ್, ಕ್ಯಾಲೋರಾಡೋ, ಯೂಟಾ, ನ್ಯೂ ಮೆಕ್ಸಿಕೋ, ನೆವಾಡ, ಆರಿeóÉೂೀನ ಮತ್ತು ಕ್ಯಾಲಿಫೋರ್ನಿಯ ಪ್ರದೇಶಗಳಲ್ಲಿ ಹರಡಿದೆ. ಪ್ರವಾಹ ಕಡಿಮೆಯಿದ್ದಾಗ ಒಂದು ಸೆಕೆಂಡಿಗೆ 3,000 ಘನ ಅಡಿ ನೀರು ಹರಿದರೆ, ಹೆಚ್ಚಿನ ಪ್ರವಾಹವಿದ್ದಾಗ ಇದರ ಘನ ಗಾತ್ರ 2,00,000 ಘನ ಅಡಿಗಳು. ನದಿಯ ಮೇಲ್ಪ್ರದೇಶದಲ್ಲಿ ಅಭಿವೃದ್ಧಿಕಾರ್ಯ ನಡೆಯುತ್ತಿದ್ದು ಅದು ಪೂರ್ಣವಾದಾಗ ನದಿಯ ಪ್ರವಾಹದ ಗಾತ್ರ ಕಡಿಮೆಯಾಗುವ ಸಂಭವವಿದೆ. ಇದು ತನ್ನ ಮುಖಜಭೂಮಿಯಲ್ಲಿ ವರ್ಷಕ್ಕೆ 17,00,00,000 ಘನಗಜಗಳಷ್ಷು ಮೆಕ್ಕಲು ಮಣ್ಣನ್ನು ತಂದು ಹರಡುತ್ತದೆ.

 ಕಾಲೊರಾಡೋ ನದೀ ಬಯಲಿನಲ್ಲಿ ಮೊದಲಿಗೆ ಪ್ಯೂಬ್ಲೋ ಜನ ವಾಸಿಸುತ್ತಿದ್ದರು. ಬಂಡೆಗಲ್ಲುಗಳ ಮೇಲೆ ಉಳಿದು ಬಂದಿರುವ ಹೀರೊಗ್ಲಿಫಿಕ್ ಸಾಂಕೇತಿಕ ಬರೆಹಗಳು, ಅವರ ನೀರಾವರಿ ಪದ್ಧತಿ ಮತ್ತು ಅವರ ನಿವಸನಗಳು-ಇವುಗಳ ಅವಶೇಷಗಳು ಮಾತ್ರ ಈಗ ಅಲ್ಲಿವೆ. ಸ್ಪ್ಯಾನಿಷ್ ಪ್ರಾದಿಗಳು ಸ್ಥಾಪಿಸಿದ್ದ ಕೇಂದ್ರಗಳ ಅವಶೇಷಗಳೂ ಅಲ್ಲಲ್ಲಿ ಕಾಣಬರುತ್ತವೆ. ಈ ನದಿಯ ಇಕ್ಕೆಲಗಳಲ್ಲೂ ಪ್ರಕೃತಿ ಸೌಂದರ್ಯ ಅವರ್ಣನೀಯವಾಗಿ ಶೋಭಿಸುತ್ತದೆ.

 ಆಳವಾದ ಪಾತ್ರದಲ್ಲಿ 1,000 ಮೈಲಿಗಳುದ್ದ ಹರಿಯುವ ಈ ನದಿಗೆ ಎರಡು ಕಡೆಗಳಿಂದಲೂ ಅನೇಕ ಉಪನದಿಗಳು ಬಂದು ಸೇರುತ್ತದೆ. ಉಪನದಿಗಳ ಸಂಗಮಸ್ಥಾನದಲ್ಲಿ ಸಮತಟ್ಟಾದ ಭೂಪ್ರದೇಶವಿರುವುದರಿಂದ, ಆಳವಾದ ನದೀಪಾತ್ರ ಹಲವು ಭಾಗಗಳಾಗಿ ಒಡೆದಿದೆ. ಈ ಉಪನದಿಗಳಿಗೂ ಆಳವಾದ ಪಾತ್ರಗಳುಂಟು. ಈ ಪಾತ್ರಗಳ ಪಾಶ್ರ್ವಗಳಲ್ಲಿ ಮತ್ತು ತಳಭಾಗದಲ್ಲಿ ಬಣ್ಣಬಣ್ಣದ ಶಿಲೆಗಳು ತುಂಬಿ ಮನೋಹರ ದೃಶ್ಯಗಳನ್ನೊದಗಿಸುತ್ತವೆ. ಇದರ ಬಳಿ ಕ್ಯಾಲಿಫೋರ್ನಿಯಪ್ರದೇಶದ ಸಾಲ್ಟನ್‍ಬೇಸಿನ್ ಬಳಿ ಕಾಲೊರಾಡೋ ಮರುಭೂಮಿಯಿದೆ. ಇದು ಕ್ಯಾಲಿಫೋರ್ನಿಯ ಕೊಲ್ಲಿಯಿಂದ ವಾಯುವ್ಯಕ್ಕೆ 150 ಮೈಲಿಗಳ ದೂರ ಪ್ರಸರಿಸಿದೆ. ಈ ಕೊಲ್ಲಿ ಪ್ರಾಚೀನ ಕಾಲದಲ್ಲಿ ಇನ್ನೂ ದೊಡ್ಡದಾಗಿತ್ತು. ಕ್ರಮೇಣ ನದಿ ಹೊತ್ತು ತಂದ ಮೆಕ್ಕಲು ಮಣ್ಣಿನಿಂದ ಒಂದು ದೊಡ್ಡ ಕಟ್ಟೆ ಏರ್ಪಟ್ಟು ಸಮುದ್ರದ ಸ್ವಲ್ಪ ಭಾಗ ಬೇರ್ಪಟ್ಟಿತ್ತು. ಈ ಕಟ್ಟೆಯನ್ನು ನದಿ ಮತ್ತೆ ಕೊರೆದು ಸಮುದ್ರವನ್ನು ಪ್ರವೇಶಿಸಿತ್ತು. ಒಳಭಾಗದ ಈ ಪ್ರದೇಶ ಸಮುದ್ರಮಟ್ಟದಿಂದ 235 ಅಡಿ ಕೆಳಗಿದೆ. ಇದಕ್ಕೆ ಸಾಲ್ಟನ್ ಸಮುದ್ರವೆಂದು ಹೆಸರಾಗಿದೆ. ಇದರ ಜಲಾನಯನ ಪ್ರದೇಶದ ವಿಸ್ರ್ತಿರ್ಣ 300 ಚ. ಮೈ. ಕಟ್ಟೆಯಲ್ಲಿ ಒಡಕುಂಟಾದರೆ ಇಡೀ ಇಂಪೀರಿಯರ್ ಕಣಿವೆ ನೀರಿನಲ್ಲಿ ಮುಳುಗಿ ಹೋಗುವ ಮತ್ತು ಪೆಸಿಫಿಕ್ ಸಾಗರದ ದಕ್ಷಿಣ ಹಾದಿ ಮುಚ್ಚಿಹೋಗುವ ಸಂಭವವಿದ್ದುದರಿಂದ ಸದರನ್ ಪೆಸಿಫಿಕ್ ಕಂಪೆನಿ 20,00,000 ಡಾಲರುಗಳ ವೆಚ್ಚದಲ್ಲಿ ರಕ್ಷಣೆ ಸೇತುವೆಗಳನ್ನು ನಿರ್ಮಿಸಿದೆ.

 ಮೆಕ್ಸಿಕೋ ಮತ್ತು ಸಂಯುಕ್ತಮಂಸ್ಥಾನ ನಡುವೆ ಈ ನದೀ ನೀರಿನ ಬಳಕೆಯ ಬಗ್ಗೆ ಒಪ್ಪಂದ ಏರ್ಪಟ್ಟಿದೆ. ಈ ನದಿಯಿಂದ ನೀರಾವರಿ ಮತ್ತು ವಿದ್ಯುಚ್ಛಕ್ತಿಯ ಉತ್ಪಾದನೆಗೆ ಧಾರಾಳವಾಗಿ ಅವಕಾಶವುಂಟು. 50,00,000 ಅಶ್ವಸಾಮಥ್ರ್ಯಗಳಿಗೂ ಹೆಚ್ಚಿದೆ ವಿದ್ಯುಚ್ಛಕ್ತಿಯನ್ನು ಈ ನದಿಯ ನೀರಿನಿಂದ ಉತ್ಪಾದಿಸುವ ಸಾಧ್ಯತೆಯಿದೆ. ನದಿಯಿಂದ ಬರುವ ಮಣ್ಣಿನಿಂದ ಉಂಟಾಗುವ ತೊಂದರೆಗಳನ್ನು ನಿವಾರಿಸಲು ಅಧಿಕ ಮೊತ್ತವನ್ನು ವ್ಯಯಿಸಬೇಕಾಗಿದೆ. ಈ ತೊಂದರೆಗಳನ್ನು ನಿವಾರಿಸಲು ಮೇಲ್ಟ್ರದೇಶದಲ್ಲಿ ಒಂದು ಅಣೆಕಟ್ಟನ್ನು ನಿರ್ಮಿಸಲು ಅಮೆರಿಕ ಸರ್ಕಾರ ಒಪ್ಪಿಗೆ ನೀಡಿದೆ. ಆದರೆ ವಿವಿಧ ಪ್ರಾಂತ್ಯಗಳ ನೀರಿನ ಹಕ್ಕಿನ ಬಗ್ಗೆ ವಿವಾದಗಳಿರುವುದರಿಂದ 1922ರಲ್ಲಿ ಕೇಂದ್ರ ಸರ್ಕಾರ ಒಂದು ಯೋಜನೆಯನ್ನು ತಯಾರಿಸಿ ಅದರಂತೆ ಕ್ಯಾಲೋರಾಡೋ, ನ್ಯೂ ಮೆಕ್ಸಿಕೋ, ಯೂಟಾ ವೀಯೊಮಿಂಗ್ ರಾಜ್ಯಗಳಿಗೆ ಮತ್ತು ಆರಿಜೋóನ ಮತ್ತು ಕ್ಯಾಲಿಫೋರ್ನಿಯ ಮತ್ತು ನೆವಾಡಗಳಿಗೆ ಸಲ್ಲಬೇಕಾದ ನೀರಿನ ಬಗ್ಗೆ ಇತ್ಯರ್ಥ ಮಾಡಿತು. ಅಣೆಕಟ್ಟಿನ ನಿರ್ಮಾಣಕ್ಕೆ 1928ರಲ್ಲಿ ಅಧ್ಯಕ್ಷ ಹರ್ಬರ್ಟ್ ಹೂವರ್ ಆಜ್ಞೆ ನೀಡಿದ. 1936ರಲ್ಲಿ ಈ ಕಾರ್ಯ ಪೂರ್ಣಗೊಂಡಿತು. 726' ಎತ್ತರದ ಕಟ್ಟೆಯಲ್ಲಿ 44,00,000 ಘನ ಗಜಗಳಷ್ಟು ಕಾಂಕ್ರೀಟ್ ಬಳಸಲಾಗಿದೆ. 119 ಮೈ. ಉದ್ದದ ಲೇಕ್ ಮೀಡ್ ಜಲಾಶಯದಲ್ಲಿ 3,10,47,000 ಎಕರೆ ಘನ ಅಡಿ ನೀರು ನಿಲ್ಲುತ್ತದೆ: ಇಲ್ಲಿ ವಿದ್ಯುಜ್ಜನಕ ಕೇಂದ್ರದ ಉತ್ಪಾದನ ಶಕ್ತಿ 13,44,800 ಕಿವಾ. ಇದಕ್ಕೆ ಹೂವರ್ ಕಟ್ಟೆ ಎಂದು 1947ರಲ್ಲಿ ಅಧಿಕೃತವಾಗಿ ಹೆಸರಿಡಲಾಯಿತು. ಈ ಯೋಜನೆಯಿಂದ ನೀರಾವರಿ ಮತ್ತು ವಿದ್ಯುತ್ ಸೌಲಭ್ಯ ಹೆಚ್ಚು ದೊರೆಕುತ್ತಿರುವುರಿಂದ ಈ ಪ್ರದೇಶದಲ್ಲಿ ಜನಸಾಂದ್ರತೆ ಹೆಚ್ಚುತ್ತಿದೆ: ಆರ್ಥಿಕವಾಗಿ ಅಭಿವೃದ್ಥಿ ಸಾಧಿಸುತ್ತಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ